Monday, December 14, 2009

'ವಿಸ್ಮಯ’ಗಳ ಜಾಡಿನಲ್ಲಿ...

ಇದು ವೈಜ್ಞಾನಿಕ ಯುಗ. ಎಲ್ಲಿ ನೋಡಿದರೂ ವಿಜ್ಞಾನ-ತಂತ್ರಜ್ಞಾನದ ಚಮತ್ಕಾರಗಳು, ತಾಂತ್ರಿಕ ಉಪಕರಣಗಳು, ಎಲ್ಲದ್ದಕ್ಕೂ ತಂತ್ರಜ್ಞಾನದ ಸ್ಪರ್ಶ. ಜಗತ್ತೇ ಒಂದು ಹಳ್ಳಿಯೆಂಬ ಕಲ್ಪನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿಜ್ಞಾನ-ತಂತ್ರಜ್ಞಾನಗಳು ಇಂದು ಸಾವಿನ ರಹಸ್ಯವನ್ನೂ ಬೇಧಿಸುವಲ್ಲಿ ದಾಪುಗಾಲಿಟ್ಟಿವೆ. ಅಷ್ಟರಮಟ್ಟಿಗೆ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕನ್ನು ಆವರಿಸಿವೆ ಆದರೆ...???

ಆದರೆ ಇದಕ್ಕೆ ಸಮನಾಗಿ ಜನರ ಮನಸ್ಸುಗಳು ಬದಲಾಗಿವೆಯೇ? ವೈಜ್ಞಾನಿಕ ದೃಷ್ಟಿಕೋನ ಅವರ ಕಣ್ಣುಗಳಲ್ಲಿ ಮಿಂಚುತ್ತಿದೆಯೇ?, ಕಣ್ಣಿಗೆ ಕಂಡ ಸತ್ಯವನ್ನು ತಾರ್ಕಿಕವಾಗಿ ಚಿಂತಿಸುವ ಮನೋಭಾವ ರೂಡಿಯಾಗಿದೆಯೇ? ಇದಕ್ಕೆ ಉತ್ತರ ಮೌನ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಜಗತ್ತು ಈ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದರೂ, ಅದೇಕೆ ಭಾರತೀಯರು ಮಾತ್ರ ತಮ್ಮ ಮನಸ್ಸುಗಳನ್ನು ಬದಲಾವಣೆಯಗೆ ತೆರೆಯುತ್ತಿಲ್ಲ, ಇದಕ್ಕೆ ನಾನಾ ಕಾರಣಗಳಿವೆ. ಜನರಲ್ಲಿ ಇಂದಿಗೂ ಮೌಢ್ಯ ತಂಬಿ ತುಳುಕುತ್ತಿದೆ, ಧರ್ಮ-ಶಾಸ್ತ್ರಗಳೇ ಇವರ ಬದುಕಿನ ನಿಯಂತ್ರಕ ಶಕ್ತಿಯಾಗಿ ವಿಜೃಂಭಿಸುತ್ತಿವೆ. ಮಾನವೀಯತೆಗಿಂತ ಜಾತಿ, ಕಂದಾಚಾರಗಳೇ ಮೇಲುಗೈ ಸಾಧಿಸಿವೆ. ದುರಾದೃಷ್ಟದ ಸಂಗತಿಯೆಂದರೆ ಸಮಾಜದ ಓರೆಕೋರೆಗಳನ್ನು ನೇರ ಮಾಡಬೇಕಾದ, ಸಮಾಜದ ಮುನ್ನಡೆಗೆ ಮಾರ್ಗದರ್ಶಿಯಾಗಬೇಕಾದ, ಜನರ ಹೃದಯಗಳಲ್ಲಿ ಬದಲಾವಣೆಯ ಹರಿಕಾರನಾಗಬೇಕಾದ ಮಾಧ್ಯಮಗಳೂ ಕೂಡ ಸಮಾಜದ ಯಥಾವತ್‌ ಪ್ರತಿಬಿಂಬಗಳಂತೆ ವರ್ತಿಸುತ್ತಿವೆ. ಇದಕ್ಕೆ ಸ್ಪಷ್ಟ ನಿದರ್ಶನ. ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ’ಅತಿಮಾನುಷ’ ಹಂದರವುಳ್ಳ ಕಾರ್ಯಕ್ರಮಗಳು.

ಈ ಅತಿಮಾನುಷ ಕಾರ್ಯಕ್ರಮಗಳನ್ನು ನೋಡಿದರೆ ಕನ್ನಡದ ಬಹುತೇಕ ವಾಹಿನಿಗಳೂ ಮೌಢ್ಯತೆಯನ್ನು ಬಿತ್ತುವ ಕಾಯಕದಲ್ಲಿ ಪೈಪೋಟಿಗೆ ಬಿದ್ದಿರುವಂತೆ ಕಾಣುತ್ತಿದೆ. ಜನರ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಧರ್ಮ ಬಿತ್ತುವ ಬದಲು ಕೆಲವು ವಿಚಿತ್ರ, ಅಸಹಜ ಘಟನೆಗಳನ್ನೇ ಅತಿಮಾನುವ ಎಂದು ಬಿಂಬಿಸಿ ಜನರ ನಂಬಿಕೆಗೆ ನೀರೆರೆಯುವ ಕೆಲಸವನ್ನು ಈ ಕಾರ್ಯಕ್ರಮಗಳು ಮಾಡುತ್ತಿವೆ. ಇಂಥದ್ದೊಂದು ಪರಂಪರೆಗೆ ಶಂಕುಸ್ಥಾಪನೆ ಮಾಡಿದ್ದು ಟಿವಿ9. ಈ ವಾಹಿನಿಯ ’ಹೀಗೂ ಉಂಟೆ’ ಭರ್ಜರಿ ಯಶಸ್ಸು ಸಾಧಿಸಿತು. ರಾಜ್ಯದ ಮನೆ ಮನೆಯಲ್ಲೂ ಕಾರ್ಯಕ್ರಮಕ್ಕೆ ಕಾದುಕುಳಿತುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಪ್ರಸಾರವಾದ ಮರುದಿನ ಆ ಸ್ಥಳದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಯಾರ ಗಮನಕ್ಕೂ ಬಾರದೆ ಯಾವುದೇ ಹಳ್ಳಿಯೊಂದರಲ್ಲಿದ್ದ ದೇವಸ್ಥಾನ ಸಂಕಷ್ಟದಲ್ಲಿರುವವರಿಗೆ ಪವಿತ್ರ ಸ್ಥಳವಾಗಿರುತ್ತದೆ, ’ಅತಿ’ಮಾನುಷ ವ್ಯಕ್ತಿಯೋ ಇಲ್ಲ ಪವಾಡ ಪುರುಷನೋ ಬೆಳಗಾಗುವುದರೊಳಗೆ ಜನಪ್ರಿಯನಾಗಿಬಿಡುತ್ತಾನೆ. ಈ ಕಾರ್ಯಕ್ರಮದ ಅದ್ಭುತ ಪಾಪುಲಾರಿಟಿಯನ್ನು ಕಂಡ ಇತರ ವಾಹಿನಿಗಳು ತಾವೂ ಇಂಥದೇ ಕಾರ್ಯಕ್ರಮವನ್ನು ಆರಂಭಿಸಿಯೇ ಬಿಟ್ಟವು. ರಾಜ್ಯದ ಮೂಲೆ ಮೂಲೆಯಲ್ಲಿರುವ ’ತರ್ಕಕ್ಕೆ ನಿಲುಕದ, ಅಗೋಚರ, ವಿಸ್ಮಯ, ಭಯಾನಕ, ಅದ್ಭುತ’ ಘಟನೆ, ವ್ಯಕ್ತಿಗಳನ್ನು ಹುಡುಕಲು ಆರಂಭಿಸಿದವು. ಈವರೆಗೆ ಈ ರೀತಿ ’ಕಂಡುಹಿಡಿಯಲಾದ’ ಪವಿತ್ರ ಸ್ಥಳಗಳೆಷ್ಟೋ, ಪವಾಡ ಪುರಷರೆಷ್ಟೋ. ಇನ್ನು ಮುಂದೆ ಕನ್ನಡಿಗರಿಗೆ ಯಾವ ಸಮಸ್ಯೆಗಳೂ ಇರುವುದಿಲ್ಲ.

ಇದೀಗ ಸುವರ್ಣ ವಾಹಿನಿಯೂ ಈ ಪರಂಪರೆಗೆ ಸೇರಿಕೊಂಡಿದ್ದರೂ ತನ್ನದೇ ಹೊಸ ಹಾದಿಯನ್ನು ಹಿಡಿದಿದೆ. ’ನಡೆದದ್ದೇನು’ ಹೆಸರಿನ ಕಾರ್ಯಕ್ರಮ ’ವಿಸ್ಮಯ’ ಸರಣಿಯ ಕಾರ್ಯಕ್ರಮವಾದರೂ ಇದರ ಪ್ರಸ್ತುತಿ ಮಾತ್ರ ಸಂಪೂರ್ಣ ಭಿನ್ನ. ’ನಡೆದದ್ದೇನು’ ಸುವರ್ಣ ವಾಹಿನಿಯಲ್ಲಿ ಈಗಷ್ಟೇ ಆರಂಭವಾಗಿದೆ. ನಿರೂಪಣೆ ವಿಶಿಷ್ಟವಾಗಿದೆ. ಬೆಳಕಿನ ಸಂಯೋಜನೆ, ನಿರೂಪಕನ ಹಿಂಬದಿಯ ಟಿವಿ ಇವೆಲ್ಲ ನಿರೂಪಣೆಯನ್ನು ಆಕರ್ಷಕವಾಗಿಸಿವೆ. ನಿರೂಪಕನಿಗೆ ನಿರೂಪಣೆಯಲ್ಲಿ ಇನ್ನೂ ಲಯ ಸಿಕ್ಕಿಲ್ಲ. ಸ್ಕ್ರಿಪ್ಟ್‌ ಮತ್ತಷ್ಟು ಬಿಗಿಯಾಗಬೇಕು, ಇನ್ನು ಬೆಳಕಿಲ ಪ್ರದೀಪ್‌ ನೀಡಿರುವ ಹಿನ್ನೆಲೆ ಧ್ವನಿ ಚೆನ್ನಾಗಿದೆ. ಯಾವುದೇ ವಿಷಯವನ್ನು ಪ್ರಸ್ತುತಪಡಿಸುವಾಗ, ಘಟನೆಗಳನ್ನು ಚಿತ್ರಗಳ ರೂಪದಲ್ಲಿ ಮರುಸೃಷ್ಟಿ ಮಾಡುವುದು ನನಗೆ ತಿಳಿದ ಮಟ್ಟಿಗೆ ಕನ್ನಡ ಟಿವಿ ಮಾಧ್ಯಮದಲ್ಲೇ ವಿನೂತನ ಪ್ರಯೋಗ. ಇದು ಕಾರ್ಯಕ್ರಮಕ್ಕೆ ಕಲಾತ್ಮಕತೆಯನ್ನು ತಂದುಕೊಟ್ಟಿರುವುದಲ್ಲದೆ, ಚಿತ್ರೀಕರಣದಲ್ಲಿ ಮರುಸೃಷ್ಟಿಸಲು ಸಾಧ್ಯವಾಗದ ಎಷ್ಟೋ ಸನ್ನಿವೇಶಗಳನ್ನು ಇದರಿಂದ ಮರುಸೃಷ್ಟಿಸಲು ಸಾಧ್ಯ.

ಸುವರ್ಣ ವಾಹಿನಿಯ ಈ ಕಾರ್ಯಕ್ರಮ ಕರ್ನಾಟಕದಾಚೆಗಿನ ಪ್ರಕರಣಗಳನ್ನು ಕನ್ನಡಿಗರ ಮುಂದಿಡುತ್ತಿದೆ. ಈ ದೃಷ್ಟಿಯಿಂದ ಈ ಕಾರ್ಯಕ್ರಮ ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದೆಲ್ಲಕ್ಕಿಂತ ಬಹಳ ಮುಖ್ಯವಾದ ಅಂಶವೆಂದರೆ, ಈ ಕಾರ್ಯಕ್ರಮ ಯಾವುದೇ ವಿಸ್ಮಯದ ವಿಚಾರಗಳನ್ನು ಎಲ್ಲ ಕೋನಗಳಲ್ಲಿ ವಿಶ್ಲೇಷಣೆಗೊಳಪಡಿಸುತ್ತದೆ. ಅತಿಮಾನುಷವೆಂದು ನಂಬಲಾಗುವ ಒಂದು ಘಟನೆಗೆ ಶಾಸ್ತ್ರ-ಸಂಪ್ರದಾಯಗಳ ವಿವರಣೆ, ಅದಕ್ಕೆ ಜನರ ನಂಬಿಕೆ ಏನೆಂಬುದನ್ನೂ ಇದು ಪ್ರಸ್ತುತಪಡಿಸುತ್ತದೆ. ಇದರ ಜೊತೆಗೆ ತಜ್ಞರಿಂದ ವೈಜ್ಞಾನಿಕವಾಗಿಯೂ ವಿಶ್ಲೇಷಿಸುವ ಇದರ ಪ್ರಯತ್ನ ಇದನ್ನು ಬೇರೆಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ನಿಲ್ಲಿಸಿದೆ. ಈ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯೂ ಇದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ತೋರಿಸಿದ ’ವಾನರ ಮಾನವ’ರಿಗೆ ಸರ್ಕಾರದ ಧನಸಹಾಯ ಕೊಡಿಸಿದ್ದು ಇದಕ್ಕೊಂದು ಉದಾಹರಣೆ. ಈ ದೃಷ್ಟಿಯಲ್ಲೂ ಈ ಕಾರ್ಯಕ್ರಮ ಬೇರೆಲ್ಲವುಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಆದರೆ ಅಂತಿಮವಾಗಿ ಘಟನೆಯ ಸ್ವರೂಪವನ್ನು ನೇರವಾಗಿ ಹೇಳದೆ ತೀರ್ಮಾನ ನಿಮ್ಮದೇ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಡುತ್ತದೆ. ಜನರ ನಂಬಿಕೆ, ಸಂಪ್ರದಾಯಗಳನ್ನು ಗೌರವಿಸಬೇಕು ನಿಜ. ಹಾಗೆಂದು ಅದು ಮೂಢನಂಬಿಕೆಯಾಗಿದ್ದರೆ, ಅವೈಜ್ಞಾನಿಕವಾಗಿದ್ದರೆ ಅದನ್ನು ಪೋಷಿಸುವುದು ಇಲ್ಲವೇ ನಗಣ್ಯ ಮಾಡುವುದು ಎರಡೂ ತರವಲ್ಲ. ಅತಿಮಾನುಷ ಎಂದು ನಂಬುವ ಯಾವುದೇ ಘಟನೆಯನ್ನು ಆದಷ್ಟೂ ವೈಜ್ಞಾನಿಕ ತಳಹದಿಯಲ್ಲೇ ವಿಶ್ಲೇಷಿಸುವ ಮತ್ತು ಅಂತಿಮವಾಗಿ ಅದ್ಕಕೊಂದು ತಾರ್ಕಿಕ ಅಂತ್ಯ ಕಾಣಿಸುವ ಕೆಲಸನ್ನು ಮಾಡಬೇಕು. ಆಗ ಅದು ಜನರು ಯೋಚಿಸುವಂತೆ ಮಾಡುತ್ತದೆ. ಎಲ್ಲವನ್ನೂ ತರ್ಕಿಸಿ ತೀರ್ಮಾನಿಸಬೇಕೆಂಬ ಧೋರಣೆ ಬೆಳೆಸುತ್ತದೆ. ಎಲ್ಲದ್ದಕ್ಕೂ ವೈಜ್ಞಾನಿಕ ಕಾರಣ ಹುಡುಕುವಂತೆ ಮಾಡುತ್ತದೆ.

ಈ ಜಗತ್ತಿನಲ್ಲಿ ’ತರ್ಕಕ್ಕೆ ನಿಲುಕದ, ವಿಶ್ಲೇಷಣೆಗೆ ದಕ್ಕದ, ಅನುಭವಕ್ಕೆ ಅತೀತವಾದ ಸಹಸ್ರಾರು ಸಂಗತಿಗಳಿವೆ’ಅಂದ ಮಾತ್ರಕ್ಕೆ ಅದೆಲ್ಲವೂ ಅತಿಮಾನುಷವೆಂದೇನೂ ಅಲ್ಲ. ಅದನ್ನು ತರ್ಕಕ್ಕೆ ನಿಲುಕಿಸುವ ಸಾಮರ್ಥ್ಯ ನಮಗಿನ್ನೂ ಬಂದಿಲ್ಲ, ವಿಜ್ಞಾನಕ್ಕಿನ್ನೂ ಅದು ಸಾಧ್ಯವಾಗಿಲ್ಲ ಎಂದೇ ಅರ್ಥ. ಮುಂದೊಂದು ದಿನ ಅದು ಸಾಧ್ಯವಾಗಬಹುದು. ಹೀಗಾಗಿ ತರ್ಕಾತೀತ ಘಟನೆ ಅಥವಾ ಸನ್ನಿವೇಶಗಳನ್ನು ಅತಿಮಾನುಷ ಎಂದು ಥಟ್ಟನೆ ತಿರ್ಮಾನಿಸುವುದು ಅದು ಯಾವುದೋ ಅವ್ಯಕ್ತ ಶಕ್ತಿಯ ಪವಾಡ ಎಂಬು ನಿರ್ಧರಿಸುವುದು ತರವಲ್ಲ.

ಕನ್ನಡಕ್ಕಿದೆಂಥಾ ದುರ್ಗತಿ


ಕುವೆಂಪು ಬರೆದ ’’ಶ್ರೀ ರಾಮಾಯಣ ದರ್ಶನಂ’’ ಕೃತಿ ಕನ್ನಡ ಸಾಹಿತ್ಯದ ಮೇರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಲಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ವದ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇಂಥ ಮೇರು ಕೃತಿಯ ಲಭ್ಯತೆ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ. ಕನ್ನಡ ಸಾಹಿತ್ಯಕ್ಕೆ, ಮೊಟ್ಟ ಮೊದಲ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ‘ಜ್ಞಾನಪೀಠ’ವನ್ನು ತಂದುಕೊಟ್ಟು, ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದ ಒಂದು ಮಹಾನ್‌ ಕೃತಿ ಓದುಗರಿಗೆ ಲಭ್ಯವಿಲ್ಲ ಎಂದರೆ ಇದೆಂಥಾ ದುರ್ಗತಿ. ಇದು ಕನ್ನಡಿಗರು ತಲೆ ತಗ್ಗಿಸುವಂಥ ವಿಚಾರ. ಕುವೆಂಪು ಕನ್ನಡ ಸಾಹಿತ್ಯದ ಮೇರು ಪುರುಷ. ಅವರ ತಪಸ್ಸಿನ ಫಲವಾಗಿ ಆವಿರ್ಭವಿಸಿದ ಅನರ್ಘ್ಯ ಕಾವ್ಯವೊಂದು ಓದುಗರಿಗೆ ಲಭ್ಯವಾಗದಿರುವುದು ಅತ್ಯಂತ ಖೇದದ ಸಂಗತಿ.

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರೂಗಳ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಕೆಲವೇ ದಿನಗಳಲ್ಲಿ ಈ ಮೇರುಕೃತಿ ಸಹೃದಯರ ಮನೆ ಸೇರಿತು. ಎಲ್ಲೂ ಪ್ರತಿಗಳು ಲಭ್ಯವಾಗದಾದವು. ಅಂದಿನಿಂದ ಇದು ಮರು ಮುದ್ರಣಗೊಂಡಿಲ್ಲ. ನಾನು ಈ ಕೃತಿಗಾಗಿ ಸುತ್ತದೇ ಇರುವ ಪುಸ್ತಕ ಮಳಿಗೆಗೆಳಿಲ್ಲ. ತಡಕಾಡದ ಜಾಗಗಳಿಲ್ಲ. ಒಟ್ಟಿನಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಗಾಗಿ ಮೂಲೆ ಮೂಲೆಯಲ್ಲಿ ಶೋಧಿಸಿದ್ದೇನೆ. ಎಲ್ಲಿಯೂ ಲಭ್ಯವಿಲ್ಲ. ನನ್ನಂತೆಯೇ ಈ ಮಹಾಕಾವ್ಯಕ್ಕಾಗಿ ಹಲವು ಪುಸ್ತಕದಂಗಡಿಗಳನ್ನು ಎಡತಾಕಿದವರನ್ನು ನಾನು ಕಂಡಿದ್ದೇನೆ.

ಈ ಕೃತಿಯ ಲಭ್ಯತೆ ಬೇಡಿಕೆಯ ಪ್ರಶ್ನೆ ಮಾತ್ರವಲ್ಲ. ಗೌರವದ ಪ್ರಶ್ನೆ, ಅಭಿಮಾನದ ಪ್ರಶ್ನೆ. ಇಂಥ ಕೃತಿ ಸಹೃದಯ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಅದನ್ನು ಎಲ್ಲ ಕನ್ನಡಿಗರು ಓದುವಂತೆ ಪ್ರೇರೇಪಿಸುವ ಕೆಲಸವನ್ನು ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಮಾಡಬೇಕು. ಕೂಡಲೇ ಸರ್ಕಾರ ಈ ಕೃತಿಯನ್ನು ಮರು ಮುದ್ರಿಸಿ ರಿಯಾಯಿತಿ ದರದಲ್ಲಿ ಎಲ್ಲೆಡೆ ಲಭ್ಯವಾಗುವಂತೆ ಮಾಡಬೇಕು. ಆಯಾ ಪ್ರದೇಶದ ಸಾಂಸ್ಕೃತಿಕ ಅನನ್ಯತೆಯನ್ನು, ಅದರ ವಿವಿಧ ಆಯಾಮಗಳನ್ನು ರಕ್ಷಿಸದ ಸರ್ಕಾರ ಸಂಸ್ಕೃತಿಹೀನ, ಜನರ ಬದುಕನ್ನು ಹಸನಾಗಿಸಲು ಭೌತಿಕ ಅಭಿವೃದ್ಧಿಯೊಂದೇ ಸಾಕಾಗುವುದಿಲ್ಲ, ಬದಲಿಗೆ ಸಾಂಸ್ಕೃತಿಕ ಅಭಿವೃದ್ಧಿಯೂ ಬಹಳ ಮುಖ್ಯ ಎನ್ನುವುದನ್ನು ಆಳುವ ಸರ್ಕಾರ ಅರಿತುಕೊಳ್ಳಬೇಕು.

’ಅವತಾರ್‌’ ಚಿತ್ರದ ಟ್ರೈಲರ್‌

Wednesday, December 2, 2009

’ಶ್ರೀ ರಾಮಾಯಣ ದರ್ಶನಂ’ ಎಲ್ಲಿ ದೊರೆವುದಯ್ಯ???


ಶ್ರೀ ರಾಮಾಯಣ ದರ್ಶನಂ ಕೃತಿ ಕನ್ನಡ ಸಾಹಿತ್ಯದ ಮೆರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಳಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ತವ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇದರ ಮರು ಮುದ್ರಣ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ ಎಲ್ಲರೂ ಇದನ್ನು ಓದಬೇಕೆಂಬ ಮಹದುದ್ದೇಶದಿಂದ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರಾಪಾಯಿಯ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಅದಾದ ನಂತರ ಬಹಷಃ ಇದು ಮರು ಮುದ್ರಣಗೊಂಡಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಇದರ ಲಭ್ಯತೆ ದುರ್ಲಭ.

ಶ್ರೀ ರಾಮಾಯಣ ದರ್ಶನಂ ಕೃತಿಯ ಗದ್ಯಾನುವಾದವನ್ನು ’ಶ್ರೀ ರಾಮಾಯಣ ದರ್ಶನಂ ವಚನಚಂದ್ರಿಕೆ’ ಎಂಬ ಹೆಸರಿನಲ್ಲಿ ದೇಜಗೌ (ದೇ.ಜವರೇಗೌಡ) ಮಾಡಿದ್ದಾರೆ. ನೀವು ಅದನ್ನು ಪರಾಮರ್ಶನ ಮಾಡಬಹುದು. ಕುವೆಂಪು ಅವರ ಮೂಲ ಕೃತಿ ಹಳಕನ್ನಡಲ್ಲಿದ್ದು ಒಬ್ಬ ಸಾಮಾನ್ಯ ಓದುಗನಿಗೆ ಅರ್ಥೈಸಿಕೊಳ್ಳಲು ಕಷ್ಟಸಾಧ್ಯ. ಹಾಗಾಗಿ ಇದರ ಗದ್ಯಾನುವಾದವನ್ನು ಪರಾಮರ್ಶಿಸುವುದರಲ್ಲಿ ಅರ್ಥವಿದೆ. ಇದು ಸಪ್ನ ಬುಕ್‌ ಹೌಸ್‌ ಮತ್ತು ಬಹುತೇಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇದರ ಬೆಲೆ 120 ರೂಪಾಯಿಗಳು. ಹಾಗೂ ಈ ಮೇರು ಕೃತಿಯ ಸರಳ ವಿವರಣೆ, ವಿಮರ್ಶೆ, ವಿಶ್ಲೇಷಣೆ ಮಾಡುವ ಹತ್ತಾರು ಕೃತಿಗಳು ಬಂದಿವೆ. ಅವುಗಳನ್ನೂ ನೀವು ಗಮನಿಸಬಹುದು. ಶಂಕರ‍್ ಮೊಕಾಶಿ ಪುಣೇಕರ್‌ ಇದನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದು ಹಲವು ಆನ್‌ಲೈನ್ ಬುಕ್‌ಸೈಟ್‌ ಗಳಲ್ಲಿ ಲಭ್ಯವಿದ್ದು ನೀವಿದನ್ನು ಆನ್‌ಲೈನ್‌ನಲ್ಲೇ ಕೊಳ್ಳಬಹುದು.

ಶ್ರೀರಾಮಾಯಣ ದರ್ಶನಂ ಮೂಲ ಕೃತಿಯನ್ನೇ ಓಡಬೇಕೆಂಬುದು ನಿಮ್ಮ ಅಭಿಲಾಷೆಯಾದರೆ, ಅದಕ್ಕೆ ಕೆಲವು ಮಾರ್ಗಗಳಿವೆ.
1. ಈ ಕೃತಿಯನ್ನು ಇಟ್ಟಿರುವ ಸ್ನೇಹಿತರ ಬಳಿ ಅದನ್ನು ಜೆರಾಕ್ಸ್‌ ಮಾಡಿಸಿಕೊಳ್ಳುವುದು,
2. ಬೆಂಗಳೂರಿನಲ್ಲಿ ಕೆಲವು ಅಪ್ರತಿಮ ಸಾಹಿತ್ಯ ಪ್ರೇಮಿಗಳಿದ್ದಾರೆ. ಅವರ ಬಳಿ ಎಲ್ಲೂ ಲಭ್ಯವಾಗದ ಅತ್ಯಂತ ಹಳೆಯ ಮಹತ್ವದ ಕೃತಿಗಳೆಲ್ಲ ಲಭ್ಯವಾಗುತ್ತವೆ. ಅಂಥವರ ವಿಳಾಸ ನನ್ನ ಬಳಿ ಸಧ್ಯ ಲಭ್ಯವಿಲ್ಲ. ಮುಂದೆ ಅದನ್ನು ನಾನಿಲ್ಲಿ ಅಪ್‌ಡೇಟ್‌ ಮಾಡುತ್ತೇನೆ. ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಬಹುದು.
3. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಜಿಲ್ಲಾ ಶಾಖೆಗಳಲ್ಲೂ ಶ್ರೀ ರಾಮಾಯಣ ದರ್ಶನಂ ಕೃತಿ ಲಭ್ಯವಿತ್ತು. ಕೆಲವು ಜಿಲ್ಲೆಗಳಲ್ಲಿ ಎಲ್ಲ ಪ್ರತಿಗಳೂ ಮಾರಾಟವಾಗಿಲ್ಲ, ಹಾಗಾಗಿ ಕೆಲವು ಪ್ರತಿಗಳಾದರೂ ಉಳಿದಿರುವ ಸಾಧ್ಯತೆ ಇದೆ. ನೀವು ಟೌನ್‌ ಹಾಲ್‌ ಬಳಿಯ ’ಕನ್ನಡ ಭವನ’ದಲ್ಲಿರುವ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದರೆ ಈ ಕುರಿತು ಮಾಹಿತಿ ಸಿಗುತ್ತದೆ.

ಕುವೆಂಪು ಜೀವನ, ಸಾಹಿತ್ಯ, ವಿಮರ್ಶೆ, ಸಂದೇಶ, ಜೀವನ ತತ್ವಗಳನ್ನು ವಿಶ್ಲೇಷಿಸುವ, ವಿವರಿಸುವ ಅಸಂಖ್ಯ ಕೃತಿಗಳು ಕನ್ನಡದಲ್ಲಿವೆ. ತಕ್ಷಣದ ಪರಾಮರ್ಶನಕ್ಕೆ ಕೆಳಗಿನ ಕೆಲವು ವೆಬ್‌ತಾಣಗಳನ್ನು ನೋಡಬಹುದು.
ಕುವೆಂಪು ಬಗೆಗೆ ಇಂಗ್ಲಿಷ್‌ನಲ್ಲಿ ಸಂಕ್ಷಿಪ್ತ ಲೇಖನ: http://en.wikipedia.org/wiki/Kuvempu
ಕುವೆಂಪು ಅಧಿಕೃತ ತಾಣ: http://www.kuvempu.com/
ಜ್ಞಾನಪೀಠ ಪ್ರಶಸ್ತಿ ವಿಜೇತರು: http://ekavi.org/jnanpeeth.htm
ಕುವೆಂಪು ಚಿತ್ರಗಳು: http://www.kamat.com/kalranga/kar/writers/kuvempu.htm
ಕುವೆಂಪು ಕುರಿತು: http://www.ourkarnataka.com/Articles/starofmysore/kuvempuremember.htm

ನೀಡುವ ಕೈಗಳಿವು...


ಸ್ನೇಹಿತರೇ,

ನಿಮ್ಮ ನೆರೆಹೊರೆಯಲ್ಲಿ ಎಂದರೆ ಮನೆಯ ಅಕ್ಕಪಕ್ಕ, ನಿಮ್ಮದೇ ಬಡಾವಣೆಯಲ್ಲಿ, ನಿಮ್ಮ ಸ್ನೇಹಿತರ ಮನೆಗಳಲ್ಲಿ, ನಿಮ್ಮ ಬಂಧು-ಬಾಂಧವರ ನಡುವೆ , ನಿಮ್ಮದೇ ಮನೆಯಲ್ಲಿ ಅಥವ ಇನ್ನೆಲ್ಲೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದಾರಾ? ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಮುಂದೆ ಓದಲಾಗದ ಬಡತನವೇ? ವಿದ್ಯಾರ್ಥಿ ಚುರುಕುಮತಿ, ಚಾಣಾಕ್ಷನಾಗಿದ್ದೂ ಕುಟುಂಬದ ಹಣಕಾಸಿನ ದಾರಿದ್ಯ್ರದಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿ ದುಡಿಮೆಗಿಳಿಯಬೇಕಾದ ಅನಿವಾರ್ಯತೆ ಇದೆಯೇ? ಹೌದು ಇಂತಹ ಬಡ , ನತದೃಷ್ಟ ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರನ್ನು ಗುರ್ತಿಸಿ ಅವರಿಗೆ ನೆರವಾಗಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನಮಗೆ ನೇರವಾಗಿ ಸಹಾಯ ಮಾಡುವ ಸಾಮರ್ಥ್ಯ ಇಲ್ಲವಾದರೆ ಕೊನೆಪಕ್ಷ ಸಹಾಯ ಸಿಗುವ ದಾರಿಯನ್ನಾದರೂ ತೋರಿಸಬಹುದಲ್ಲವೇ? ಬೇಡುವ ಕೈಗಳಿರುವಂತೆ ನೀಡುವ ಕೈಗಳೂ ಇದ್ದೇ ಇರುತ್ತವೆ.

ಹತ್ತನೇ ತರಗತಿ ಪೂರ್ಣಗೊಳಿಸಿರುವ 80%ಗಿಂತ ಹೆಚ್ಚು ಅಂಕ ಗಳಿಸಿರುವ ಬಡ ವಿದ್ಯಾರ್ಥಿಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ಅವರಿಗೆ ಈ ವಿಳಾಸ ಕೊಡಿ. ಇನ್‌ಫೋಸಿಸಿ‌ ಫೌಂಡೇಷನ್‌ ಪೋಷಣೆಯಲ್ಲಿರುವ ಪ್ರೇರಣಾ ಎಂಬ ಎನ್‌ಜಿಓ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಇದು ನೆರವಿಗಾಗಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಏರ್ಪಡಿಸಿ, ಅದರಲ್ಲಿ ನಿಗದಿತ ಅಂಕ ಗಳಿಸಿದವರ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಹಾಯ ಒದಗಿಸುತ್ತದೆ.

ಸಂಪರ್ಕಿಸಬೇಕಾದ ವ್ಯಕ್ತಿ: ಸುಧಾಕರ್‌
ವಿಳಾಸ:
ಪ್ರೇರಣಾ ಎನ್‌ಜಿಓ
ನಂ 580, 44ನೇ ಅಡ್ಡರಸ್ತೆ, 1ನೇ 'A' ಮುಖ್ಯ ರಸ್ತೆ,
ಜಯನಗರ 7ನೇ ಬ್ಲಾಕ್ ಬೆಂಗಳೂರು,
ಮೊಬೈಲ್‌ ಸಂಖ್ಯೆಗಳು:
ಸರಸ್ವತಿ - 9900906338
ಶಿವಕುಮಾರ್‌ - 9986630301 - ಹನುಮಂತನಗರ ಕಚೇರಿ,
ಬಿಂದು - 9964534667 - ಯಶವಂತಪುರ ಕಚೇರಿ

ಇದನ್ನು ಇ-ಮೇಲ್‌ ಮೂಲಕವೂ ನಿಮ್ಮ ಸ್ನೇಹಿತರಿಗೆ ಕಳಿಸಿ.

ಮೈಕ್ರೋಸಾಫ್ಟ್‌ನಿಂದ ಭಾರತೀಯ ಭಾಷೆಗಳ ಸಾಫ್ಟ್‌ವೇರ್‌


ಮೈಕ್ರೋಸಾಫ್ಟ್‌ ಇಂಡಿಯಾ ಡೆವೊಲಪ್‌ಮೆಂಟ್‌ ಸೆಂಟರ್‌ (MSIDC) ಭಾರತೀಯ ಭಾಷೆಗಳನ್ನು ಲಿಪ್ಯಂತರ (ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಲಿಪಿಗೆ ಪರಿವರ್ತಿಸುವುದು) ಮಾಡುವ ಸಾಫ್ಟ್‌ವೇರ್‌ ಬಿಡುಗಡೆಗೆ ಸಿದ್ಧವಾಗಿದೆ. ಇಂಗ್ಷಿಷ್‌ ಕೀ ಬೋರ್ಡ್‌ನಿಂದಲೇ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಬರೆಯಲು ಈ ಸಾಫ್ಟ್‌ವೇರ್‌ ಅವಕಾಶ ನೀಡಲಿದೆ. ಈ ಸಾಫ್ಟ್‌ವೇರ್‌ನ ಬೀಟಾ ಆವೃತ್ತಿ ಆರಂಭದಲ್ಲಿ ಉಚಿತವಾಗಿ ಲಭ್ಯವಾಗಲಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ದೊರೆಯಲಿದೆ. ಈ ಸಾಪ್ಟ್‌ವೇರ್‌ ಬಳಸಿಕೊಂಡು ಮೈಕ್ರೋಸಾಫ್ಟ್‌ನಲ್ಲಿ ರನ್‌ ಆಗುವ ಯಾವುದೇ ಅ‌ಪ್ಲಿಕೇಶನ್‌ಲ್ಲಿ ಭಾರತೀಯ ಭಾಷೆಗಳಲ್ಲಿ ಟೈಪ್‌ ಮಾಡಬಹುದು.

ಈ ನಡುವೆ ವಿಂಡೋಸ್‌ ಓಎಸ್‌ನ ಇತ್ತೀಚಿನ ಆವತ್ತಿ ವಿಂಡೋಸ್‌ 7 ಇತರೆ ಭಾರತೀಯ ಭಾಷೆಗಳಲ್ಲೂ ಲಭ್ಯವಾಗುವ ಸುದ್ದಿ ಬಂದಿದೆ. ಅಂತೂ ಕಂಪ್ಯೂಟರ್‌ ಕ್ಷೇತ್ರದಲ್ಲಿ ಐಟಿ ದೈತ್ಯ ಕಂಪನಿಗಳಿಂದ ಭಾರತೀಯ ಭಾಷೆಗಳಿಗೂ ಮಹತ್ವ ದೊರೆಯುತ್ತಿರುವುದು ಸಂತೋಷದ ವಿಚಾರ.