Wednesday, December 2, 2009

’ಶ್ರೀ ರಾಮಾಯಣ ದರ್ಶನಂ’ ಎಲ್ಲಿ ದೊರೆವುದಯ್ಯ???


ಶ್ರೀ ರಾಮಾಯಣ ದರ್ಶನಂ ಕೃತಿ ಕನ್ನಡ ಸಾಹಿತ್ಯದ ಮೆರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಳಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ತವ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇದರ ಮರು ಮುದ್ರಣ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ ಎಲ್ಲರೂ ಇದನ್ನು ಓದಬೇಕೆಂಬ ಮಹದುದ್ದೇಶದಿಂದ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರಾಪಾಯಿಯ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಅದಾದ ನಂತರ ಬಹಷಃ ಇದು ಮರು ಮುದ್ರಣಗೊಂಡಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಇದರ ಲಭ್ಯತೆ ದುರ್ಲಭ.

ಶ್ರೀ ರಾಮಾಯಣ ದರ್ಶನಂ ಕೃತಿಯ ಗದ್ಯಾನುವಾದವನ್ನು ’ಶ್ರೀ ರಾಮಾಯಣ ದರ್ಶನಂ ವಚನಚಂದ್ರಿಕೆ’ ಎಂಬ ಹೆಸರಿನಲ್ಲಿ ದೇಜಗೌ (ದೇ.ಜವರೇಗೌಡ) ಮಾಡಿದ್ದಾರೆ. ನೀವು ಅದನ್ನು ಪರಾಮರ್ಶನ ಮಾಡಬಹುದು. ಕುವೆಂಪು ಅವರ ಮೂಲ ಕೃತಿ ಹಳಕನ್ನಡಲ್ಲಿದ್ದು ಒಬ್ಬ ಸಾಮಾನ್ಯ ಓದುಗನಿಗೆ ಅರ್ಥೈಸಿಕೊಳ್ಳಲು ಕಷ್ಟಸಾಧ್ಯ. ಹಾಗಾಗಿ ಇದರ ಗದ್ಯಾನುವಾದವನ್ನು ಪರಾಮರ್ಶಿಸುವುದರಲ್ಲಿ ಅರ್ಥವಿದೆ. ಇದು ಸಪ್ನ ಬುಕ್‌ ಹೌಸ್‌ ಮತ್ತು ಬಹುತೇಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇದರ ಬೆಲೆ 120 ರೂಪಾಯಿಗಳು. ಹಾಗೂ ಈ ಮೇರು ಕೃತಿಯ ಸರಳ ವಿವರಣೆ, ವಿಮರ್ಶೆ, ವಿಶ್ಲೇಷಣೆ ಮಾಡುವ ಹತ್ತಾರು ಕೃತಿಗಳು ಬಂದಿವೆ. ಅವುಗಳನ್ನೂ ನೀವು ಗಮನಿಸಬಹುದು. ಶಂಕರ‍್ ಮೊಕಾಶಿ ಪುಣೇಕರ್‌ ಇದನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದು ಹಲವು ಆನ್‌ಲೈನ್ ಬುಕ್‌ಸೈಟ್‌ ಗಳಲ್ಲಿ ಲಭ್ಯವಿದ್ದು ನೀವಿದನ್ನು ಆನ್‌ಲೈನ್‌ನಲ್ಲೇ ಕೊಳ್ಳಬಹುದು.

ಶ್ರೀರಾಮಾಯಣ ದರ್ಶನಂ ಮೂಲ ಕೃತಿಯನ್ನೇ ಓಡಬೇಕೆಂಬುದು ನಿಮ್ಮ ಅಭಿಲಾಷೆಯಾದರೆ, ಅದಕ್ಕೆ ಕೆಲವು ಮಾರ್ಗಗಳಿವೆ.
1. ಈ ಕೃತಿಯನ್ನು ಇಟ್ಟಿರುವ ಸ್ನೇಹಿತರ ಬಳಿ ಅದನ್ನು ಜೆರಾಕ್ಸ್‌ ಮಾಡಿಸಿಕೊಳ್ಳುವುದು,
2. ಬೆಂಗಳೂರಿನಲ್ಲಿ ಕೆಲವು ಅಪ್ರತಿಮ ಸಾಹಿತ್ಯ ಪ್ರೇಮಿಗಳಿದ್ದಾರೆ. ಅವರ ಬಳಿ ಎಲ್ಲೂ ಲಭ್ಯವಾಗದ ಅತ್ಯಂತ ಹಳೆಯ ಮಹತ್ವದ ಕೃತಿಗಳೆಲ್ಲ ಲಭ್ಯವಾಗುತ್ತವೆ. ಅಂಥವರ ವಿಳಾಸ ನನ್ನ ಬಳಿ ಸಧ್ಯ ಲಭ್ಯವಿಲ್ಲ. ಮುಂದೆ ಅದನ್ನು ನಾನಿಲ್ಲಿ ಅಪ್‌ಡೇಟ್‌ ಮಾಡುತ್ತೇನೆ. ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಬಹುದು.
3. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಜಿಲ್ಲಾ ಶಾಖೆಗಳಲ್ಲೂ ಶ್ರೀ ರಾಮಾಯಣ ದರ್ಶನಂ ಕೃತಿ ಲಭ್ಯವಿತ್ತು. ಕೆಲವು ಜಿಲ್ಲೆಗಳಲ್ಲಿ ಎಲ್ಲ ಪ್ರತಿಗಳೂ ಮಾರಾಟವಾಗಿಲ್ಲ, ಹಾಗಾಗಿ ಕೆಲವು ಪ್ರತಿಗಳಾದರೂ ಉಳಿದಿರುವ ಸಾಧ್ಯತೆ ಇದೆ. ನೀವು ಟೌನ್‌ ಹಾಲ್‌ ಬಳಿಯ ’ಕನ್ನಡ ಭವನ’ದಲ್ಲಿರುವ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದರೆ ಈ ಕುರಿತು ಮಾಹಿತಿ ಸಿಗುತ್ತದೆ.

ಕುವೆಂಪು ಜೀವನ, ಸಾಹಿತ್ಯ, ವಿಮರ್ಶೆ, ಸಂದೇಶ, ಜೀವನ ತತ್ವಗಳನ್ನು ವಿಶ್ಲೇಷಿಸುವ, ವಿವರಿಸುವ ಅಸಂಖ್ಯ ಕೃತಿಗಳು ಕನ್ನಡದಲ್ಲಿವೆ. ತಕ್ಷಣದ ಪರಾಮರ್ಶನಕ್ಕೆ ಕೆಳಗಿನ ಕೆಲವು ವೆಬ್‌ತಾಣಗಳನ್ನು ನೋಡಬಹುದು.
ಕುವೆಂಪು ಬಗೆಗೆ ಇಂಗ್ಲಿಷ್‌ನಲ್ಲಿ ಸಂಕ್ಷಿಪ್ತ ಲೇಖನ: http://en.wikipedia.org/wiki/Kuvempu
ಕುವೆಂಪು ಅಧಿಕೃತ ತಾಣ: http://www.kuvempu.com/
ಜ್ಞಾನಪೀಠ ಪ್ರಶಸ್ತಿ ವಿಜೇತರು: http://ekavi.org/jnanpeeth.htm
ಕುವೆಂಪು ಚಿತ್ರಗಳು: http://www.kamat.com/kalranga/kar/writers/kuvempu.htm
ಕುವೆಂಪು ಕುರಿತು: http://www.ourkarnataka.com/Articles/starofmysore/kuvempuremember.htm

No comments:

Post a Comment